ಮಲ್ಲಿಕಾರ್ಜುನಕವಿ
ಸು. 1593 ವೀರಶೈವ, ಷಡ್ದರ್ಶನಗಳನ್ನು ಬಲ್ಲ ಅಹೋಬಲ ಪಂಡಿತನ ಮರಿಮಗ; ಈತನಿಗೆ ಮಲ್ಲಿನಾಥನೆಂಬ ನಾಮಾಂತರವೂ ಉಂಟು. ಈತನ ಗುರು ಸಪ್ಪೇಶ್ವರನೆಂದು ತೋರುತ್ತದೆ. ಇಮ್ಮಡಿ ಚಿಕ್ಕ ಭೂಪಾಲಕ ತನಗೆ ಪೋಷಕನೆಂದು ಹೇಳಿಕೊಂಡಿದ್ದಾನೆ. ಕವಿ ಕೆಲಕಾಲ ತೋಂಟದ ಸಿದ್ಧಲಂಗಭೂಪಾಲನ ಆಸ್ಥಾನದಲ್ಲಿದ್ದು ಅವನಿಂದ ಸನ್ಮಾನಿತನಾಗಿದ್ದನೆಂದು ತಿಳಿದು ಬರುತ್ತದೆ. ಶಂಕರಾರಾಧ್ಯ ರಚಿತ ಬಸವಪುರಾಣ, ಗುರುರಾಜಕವಿ ವಿರಚಿತ ಪಂಡಿತಾರಾಧ್ಯ ಚಾರಿತ್ರ, ಮಗ್ಗೆ ಮಾಯಿದೇವ ಸಂಕಲಿತ ಶತಕತ್ರಯ (ಕನ್ನಡ ಶತಕತ್ರಯದ ಮೂಲಗ್ರಂಥ) ಮತ್ತು ತಾನೇ ಸಂಸ್ಕøತ ಭಾಷೆಯಲ್ಲಿ ರಚಿಸಿದ ಅಮೃತೇಶ್ವರ ಭಾಷ್ಯಕ್ಕೆ ಈತ ಕನ್ನಡ ಟೀಕೆ ಬರೆದಿದ್ದಾನೆ.

ಅಮೃತೇಶ್ವರಭಾಷ್ಯ ಕನ್ನಡ ಟೀಕು ಸಹಿತವಿದೆ. ಗ್ರಂಥದ ಆದಿಯಲ್ಲಿ ಸಪ್ಪೇಶ್ವರ, ಬಸವೇಶ್ವರ, ಪಂಡಿತಾರಾಧ್ಯ, ಪಾಲ್ಕುರಿಕೆ, ಸೋಮೇಶ್ವರ ಪುರಾತನ ನೂತನ ಗಣಂಗಳನ್ನು ಹೊಗಳಿ ಬಳಿಕ ಕೇಳಲು ಕಾತುರನಾದ ಚನ್ನವೀರೇಶನಿಗೆ ಈ ಗ್ರಂಥದ ಮಹಿಮೆಯನ್ನು ಹೇಳಿ ತರುವಾಯ ಈ ಭಾಷ್ಯವನ್ನು ಆರಂಭಿಸಿ-ಧರ್ಮಾಧರ್ಮ, ಅಷ್ಟಮೂರ್ತಿ, ನಿರೀಶ್ವರ, ವೇದ, ಕರ್ಮ, ಕಾಲ ಈ ವಾದಗಳ ನಿರಸನ, ಸಾಂಖ್ಯ, ಕರ್ಮಯೋಗ, ವೈಷ್ಣವವಾದ ಇವುಗಳ ಖಂಡನ, ಶಿವ ಮಹಿಮಾ ನಿರೂಪಣ, ದೀಕ್ಷಾವಿದಾನ, ಲಿಂಗಧಾರಣವಿಧಿ, ಅಷ್ಟಾವರಣಗಳ ಮಹಿಮೆ - ಇವನ್ನು ಹೇಳುವುದರ ಮೂಲಕ ಶಿವಾದ್ವೈತ ಸಿದ್ಧಾಂತ ಪ್ರತಿಪಾದಿಸಿದ್ದಾನೆ. ಈ ಭಾಷ್ಯ 5 ಖಂಡ 34 ಅಧ್ಯಾಯಗಳಿಂದ ಕೂಡಿದೆ.

ಗ್ರಂಥದ ಕೊನೆಯಲ್ಲಿ ಕವಿ ಬಿಜ್ಜವರಪುರಾಧೀಶ್ವರರ ವಂಶವೃಕ್ಷ. ಅವರ ಬಿರುದುಗಳು. ಇಮ್ಮಡಿ ಚಿಕ್ಕಭೂಪಾಲ, ತೋಂಟದ ಸಿದ್ಧಲಿಂಗ ಭೂಪಾಲನ ಪರಾಕ್ರಮಾತಿಶಯ. ತನ್ನ ಪರಿಚಯ ಎಲ್ಲವನ್ನೂ ಹೇಳಿ ಗ್ರಂಥ ಪರಿಸಮಾಪ್ತಿಯಾದ ಕಾಲ ಸೂಚಿಸಿದ್ದಾನೆ.				    							
(ಬಿಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ